Wednesday 14 November 2012

ಕ್ರಿಕೆಟ್ ಹಾಗೂ ನವೆಂಬರ್ 15

ಕರ್ನಾಟಕ ಹಾಗೂ ಕ್ರಿಕೆಟ್‌ಗೂ ಒ೦ದು ಅವಿನಾಭಾವ ಸಂಬಂಧ. ಅದು ಕೇವಲ ಕರ್ನಾಟಕದಿಂದ ಭಾರತವನ್ನು ಪ್ರತಿನಿಧಿಸಿದ ನಮ್ಮ ಕ್ರಿಕೆಟಿಗರ ಸಂಖ್ಯೆಗೆ ಮಾತ್ರ ಸೀಮಿತವಾಗಿಲ್ಲ. ಘೆನ್ತ್ಲೆಮೆನ್ಸ್ ಘಮೆ ಎಂದೇ ಕರೆಸಿಕೊಳ್ಳುವ ಈ ಆಟವನ್ನುನಿಜಕ್ಕೂ Gentlemenಗಳ ರೀತಿಯಲ್ಲಿ ಆಡಿದವರು ನಮ್ಮ ಕರ್ನಾಟಕದ ಆಟಗಾರರು. ಅಂತಹ ಆಟಗಾರರಲ್ಲಿ ಇಂದಿಗೂ ಇಡೀ ಕ್ರಿಕೆಟ್ ವಿಶ್ವವೇ ಪ್ರೀತಿಯಿಂದ ನೆನಸಿಕೊಳ್ಳುವ ಆಟಗಾರನೆಂದರೆ ನಮ್ಮ ಜಿ.ಆರ್.ವಿಶ್ವನಾಥ್, ಎಲ್ಲರ ಪ್ರೀತಿಯ ವಿಶಿ.  


ವಿಶ್ವನಾಥ್ ಎಂದಾಕ್ಷಣ ಅವರ ಸ್ಕ್ವೇರ್ ಕಟ್, ಡೆಲಿಕೆಟ್ ಕಟ್, ಡ್ರೈವ್‌ಗಳು ಎಷ್ಟು ಪ್ರಸಿದ್ಧವೋ ಅಂತೆಯೇ  ವಿನಯ, ಒಳ್ಳೆಯತನ ಹಾಗೂ ಕ್ರೀಡಾ ಮನೋಭಾವಕ್ಕೂ ವಿಶಿ ಅಷ್ಟೇ ಪ್ರಸಿದ್ಧರು. ಒಂದರ್ಥದಲ್ಲಿ ಇಡೀ ಕರ್ನಾಟಕ ಕ್ರಿಕೆಟಿನ, ಕ್ರಿಕೆಟ್ ಬಳಗದ ಸಾಂಸ್ಕೃತಿಕ ರಾಯಭಾರಿ ನಮ್ಮ ವಿಶಿ. ಅದೇ  ಪರಂಪರೆಯನ್ನು ಉಳಿಸಿಕೊಂಡು ಬಂದವರು ನಮ್ಮ ಕುಂಬ್ಳೆ, ಶ್ರೀನಾಥ್, ವೆಂಕಿ, ಡ್ರಾವಿಡ್‌ನಂಥವರು. ವಿಶ್ವನಾಥ್ ಆಡಿದ ರಾಜ್ಯದಿಂದ ಬಂದವರು ಎಂದ ಮೇಲೆ ವಿನಯ, ಕ್ರೀಡಾ ಮನೋಭಾವ ಇರಲೇಬೇಕು ಎಂದು ನಿರೀಕ್ಷಿಸುವಷ್ಟು ಪ್ರಸಿದ್ಧಿ ನಮ್ಮ ವಿಶಿಯದು.  ಇದೇ ಮನೋಭಾವದ, ಮನಸ್ಸಿನ ಆಟಗಾರ ಸಚಿನ್ ತೆಂಡೂಲ್ಕರ್. ವಿಶಿ ಹಾಗೂ ಸಚಿನ್  ಅಂತರಾಷ್ಟ್ರೀಯ ಕ್ರಿಕೆಟಿಗೆ ಪಾದಾರ್ಪಣ ಮಾಡಿದ್ದು ನವೆಂಬರ್ 15ರಂದೇ. ತನ್ನ ಅತ್ಯದ್ಭುತ ಕಲಾತ್ಮಕ ಆಟದಿಂದ ಆಪಾರ ಸಾಧನೆ, ದಾಖಲೆ, ಪ್ರೀತಿ ಗಳಿಸಿದ ಸಚಿನ್ ಪಾದಾರ್ಪಣೆ ಮಾಡಿದ 20 ವರ್ಷಗಳ ಹಿಂದೆ ಅಂದರೆ 1969 ರಲ್ಲಿ ಪ್ರಾರಂಭವಾದದ್ದು ವಿಶಿಯ ಕಾವ್ಯದಂಥ ಅಂತರಾಷ್ಟ್ರೀಯ ಕ್ರಿಕೆಟ್ ಜೀವನ. ಸಚಿನ್‌ನದು ಪಾಕಿಸ್ತಾನದ ಎದುರಾದರೆ, ವಿಶಿಯದು ಆಸ್ಟ್ರೇಲಿಯ ವಿರುದ್ಧ. ಕಾಕತಾಳಿಯವೋ ಅಥವಾ ದಿನದ ಮಹಿಮೆಯೋ, ಭಾರತ  ಕಂಡ ಇಬ್ಬರು ಮಹಾನ್ ಕಲಾತ್ಮಕ ಆಟಗಾರರು ಕ್ರಿಕೆಟಿಂದ ಜಗವನ್ನು ಬೆಳಗಿಸಲು ಪ್ರಾರಂಭಿಸಿದ್ದು ಒಂದೇ ದಿನ.

ಕ್ರಿಕೆಟ್ ಆಟವನ್ನು ಹೇಗೆ ಆಡಬೇಕು, ಮೈದಾನದ ಒಳಗೂ, ಹೊರಗೂ ಹೇಗೆ ನಡೆಸುಕೊಳ್ಳಬೇಕು ಎನ್ನುವುದಕ್ಕೆ ದೊಡ್ಡ ಮಾದರಿ ಈ ಇಬ್ಬರು ಕ್ರಿಕೆಟಿಗರು. 91 ಟೆಸ್ಟ್ ಹಾಗೂ 25 ಒಂದು ದಿನದ ಪಂದ್ಯಗಳನ್ನಾಡಿದ ವಿಶಿ, ಇತರರು ಕಷ್ಟ ಪಡುತ್ತಿದ್ದ, ತಿಣುಕಾಡುತ್ತಿದ್ದ ಪಿಚ್‌ಗಳಲ್ಲಿ ಲೀಲಾಜಲವಾಗಿ ಆಡುತ್ತಿದ್ದವರು. ವಿಶಿಯ ಆಟವನ್ನು ಕಣ್ಣಾರೆ ಕಂಡವರ ಬಣ್ಣನೆಯನ್ನು ಕೇಳುವುದೇ ಒಂದು ಸೊಗಸು. ಇನ್ನೂ ಸಚಿನ್ ಗಳಿಸಿರುವ ರನ್ನುಗಳು, ಮಾಡಿರುವ ಸಾಧನೆ, ದಾಖಲೆಗಳು ಎಲ್ಲರಿಗೂ ತಿಳಿದ ವಿಷಯವೇ. ಕೇವಲ 14 ಶತಕಗಳನ್ನು ಗಳಿಸಿದರೂ ವಿಶಿಯ ಆಟಕ್ಕೆ ವಿಶೇಷವಾದ ಮೆರಗು. 1978ರ ಸರಣಿಯಲ್ಲಿ ಚೆನ್ನೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಗಳಿಸಿದ 124 ರನ್ನುಗಳ ಇನ್ನಿಂಗ್ಸನ್ನು ಭಾರತ ನೆಲದಲ್ಲಿ ಯಾವುದೇ ಆಟಗಾರ ಆಡಿದ  ಅತ್ತ್ಯುತ್ತಮ ಇನ್ನಿಂಗ್ಸ್‌ಗಳಲ್ಲಿ ಒಂದು ಪರಿಗಣಿಸಲಾಗುತ್ತದೆ. ತಮ್ಮ ಕ್ರೀಡಾ ಮನೋಭಾವಕ್ಕೆ ಹೆಸರಾದ ವಿಶಿ ಅಂಪೈರ್ ತೀರ್ಪುಗಳನ್ನು ಎಂದೂ ಪ್ರಶ್ನಿಸಿದವರಲ್ಲ. ಅಂಥಹ ವಿಶಿ ಅದೊಮ್ಮೆ ಅಂಪೈರ್ ತೀರ್ಪಿಗೆ ವಿರುದ್ಧವಾಗಿ ನಡೆದುಕೊಳ್ಳುವ ಘಟನೆ ನಡೆಯಿತು. ಅದು ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯ.  Golden Jubilee ಟೆಸ್ಟ್ ಎಂದೇ ಕರೆಸಿಕೊಂಡ ಪ್ರತಿಷ್ಟಿತ ಟೆಸ್ಟ್ ಪಂದ್ಯ. ಇಂಗ್ಲೆಂಡಿನ ಬಾಬ್ ಟೇಲರ್‌ಅನ್ನು ಅಂಪೈರ್ ತಪ್ಪಾಗಿ ಔಟ್ ಎಂದು ತೀರ್ಪು ಕೊಟ್ಟಾಗ, ನಾಯಕನಾಗಿದ್ದ ವಿಶ್ವನಾಥ್ ಅವರನ್ನು ವಾಪಸ್ ಕರೆಸಿದರು. ಮುಂದೆ ಇದೇ ಟೇಲರ್, ಬಾಥಮ್ ಜೊತೆ ಸೇರಿಕೊಂಡು ಪೇರಿಸಿದ ರನ್ನುಗಳಿಂದಾಗಿ ಭಾರತ ಆ ಟೆಸ್ಟ್‌ನ್ನು ಸೋಲಬೇಕಾಯಿತು. ಆದರೆ ವಿಶ್ವನಾಥ್ ಹಾಗೂ ಭಾರತ ಇಡೀ ಕ್ರಿಕೆಟ್ ವಿಶ್ವದ ಪ್ರೀತಿ ಹಾಗೂ ಗೌರವವನ್ನು ಗಳಿಸಿ ಆಗಿತ್ತು. 

ಪ್ರಾಯಶ: ಅಂಪೈರ್‌ಗಳ ಕೆಟ್ಟ ತೀರ್ಪಿಗೆ ಬಲಿಯಾದ ಸಂಖ್ಯೆಯಲ್ಲಿ ಸಹಾ ಸಚಿನ್‌ನದೇ ದಾಖಲೆ ಇರಬೇಕು. 90ರ ಆಸುಪಾಸಲ್ಲಿ ಓಟಾದ ಆಟಗಾರರಲ್ಲಿ ಸಹಾ ಸಚಿನ್‌ನದೇ ಅಗ್ರಸ್ಥಾನವಿರಬೇಕು. ಆದರೂ ಒಂದು ದಿನವಾದರೂ ಮೈದಾನದಲ್ಲಿ ತಮ್ಮ ಅಸಮಾಧಾನವನ್ನು ತೋರಿದವರಲ್ಲ ಸಚಿನ್. ಗಳಿಸಿದ ರನ್ನು, ಮಾಡಿದ ಸಾಧನೆಗಳನ್ನು ಮೀರಿ ಜನಮನಗಳಲ್ಲಿ ಭದ್ರವಾದ ಸ್ಥಾನಗಳನ್ನು ಪಡೆದಿರುವಕ್ಕೆ ಕಾರಣ ಇಂಥವುಗಳೇ. ತನ್ನ ಮೇಲೆ ಏನೇ ಅಪವಾದಗಳಿದ್ದರೂ ಅದಕ್ಕೆ ತಮ್ಮ ಬ್ಯಾಟ್‌ನಿಂದಲೇ ಉತ್ತರ ನೀಡುತ್ತಾ ಬಂದಿರುವ ಸಚಿನ್ ಈ ೨೦ ವರ್ಷಗಳಲ್ಲಿ ಬೆಳೆದು ಬಂದಿರುವ ಪರಿ ನಿಜಕ್ಕೂ ಅಚ್ಚರಿ ಮೂಡಿಸುವಂಥದ್ದು.  ತನ್ನ ಯಶಸ್ಸಿನ ಸಂತೋಷವನ್ನು ಹಂಚಿಕೊಳ್ಳಲು ತನ್ನೊಂದಿಗೆ ಕೋಟ್ಯಾಂತರ ಜನರಿರುವಾಗ ಅದಕ್ಕಿಂತ ದೊಡ್ಡ ಸಂತೋಷವೇನಿದೆ ಎಂದಿದ್ದಾರೆ ಸಚಿನ್. ಅಂತೆಯೇ ಅಂದಿನ ಕಾಲದಲ್ಲಿ ರಣಜಿ ಪಂದ್ಯಕ್ಕೇ ಸಾವಿರಾರು ಜನರನ್ನು ಕ್ರೀಡಾಂಗಣಕ್ಕೆ ಬರುವಂತೆ ಮಾಡುತ್ತಿದ್ದ  ವಿಶ್ವನಾಥ್‌ನಂಥ ಆಟಗಾರರು ಇಂದು ಅಪರೂಪ. ರಾಜ್ಯ, ದೇಶವನ್ನೂ ಮೀರಿ ಪ್ರೀತ್ಯಾದರಗಳನ್ನು ಗಳಿಸಿದ ವಿಶಿ, ಸಚಿನ್‌ರಂಥ ಆಟಗಾರರ ಸಂತತಿ ಇನ್ನಷ್ಟು ಹೆಚ್ಚಲಿ ಎಂದು ಹಾರೈಸೋಣ. ಇಂಥಹ ಮಹಾನ್ ಮಾನವೀಯ ಆಟಗಾರರ ಪಾದಾರ್ಪಣಕ್ಕೆ ವೇದಿಕೆಯಾದ ನವೆಂಬರ್ 15ರಂಥ ದಿನಗಳೂ ಕ್ರಿಕೆಟ್‌ನಲ್ಲಿ ಹೆಚ್ಚಲಿ.

- ಸವ್ಯಸಾಚಿ

No comments:

Post a Comment